ಕರುಣಿಸೋ  ರಂಗ  ಕರುಣಿಸೋ  ಕೃಷ್ಣ  ಕರುಣಿಸೋ  ರಂಗ  ಕರುಣಿಸೋ |
ಹಗಲು  ಇರುಳು  ನಿನ್ನ ಸ್ಮರಣೆ  ಮರೆಯದಂತೆ ॥ ಪ || ಕರುಣಿಸೋ ॥

ರುಕುಮಾಂಗದನಂತೆ  ವ್ರತವ  ನಾನರಿಯೆ |
ಶುಕಮುನಿಯಂತೆ  ಸ್ತುತಿಸಲು  ಅರಿಯೆ |
ಬಕವೈರಿಯಂತೆ  ಧ್ಯಾನವ  ಮಾಡಲರಿಯೇ |
ದೇವಕಿಯಂತೆ  ಮುದ್ದಿಸಲೂ  ಅರಿಯೆನೋ || ೧ || ಕರುಣಿಸೋ ||

ಗರುಡನಂದದಿ  ಪೊತ್ತು  ತಿರುಗಲು  ಅರಿಯೆ |
ಕರಿಯಲು  ಅರಿಯೆ  ಕರಿರಾಜ  ನಂತೆ |
ವರಕಪಿ  ಯಂತೆ  ದಾಸ್ಯವ  ಮಾಡಲರಿಯೇ |
ಸಿರಿಯಂತೆ  ನೆರೆದು  ಮೋಹಿಸಲು  ಅರಿಯೆನೋ || ೨ || ಕರುಣಿಸೋ ||

ಬಲಿಯಂತೆ  ದಾನವ  ಕೊಡಲು  ಅರಿಯೆ |
ಭಕ್ತಿ  ಛಲವನು  ಅರಿಯೇ  ಪ್ರಹ್ಲಾದನಂತೆ |
ವರಿಸಲು  ಅರಿಯೆ  ಅರ್ಜುನನಂತೆ  ಸಖನಾಗಿ |
ಸಲಹೋ  ದೇವರ  ದೇವ  ಶ್ರೀಪುರಂದರವಿಠ್ಠಲ || ೩ || ಕರುಣಿಸೋ ||

 ಆಲಾಪನ 
ಪಂ. ಭೀಮಸೇನ ಜೋಷಿಯವರು ಹಾಡಿದ ಪದ, ಯೂಟ್ಯೂಬ್ ನಲ್ಲಿ

ವರ್ಗ: ಪುರಂದರದಾಸ ಸಾಹಿತ್ಯ